ವಳ್ಳತ್ತೋಳ್, ನಾರಾಯಣ ಮೆನೋನ್
	1878-1958. ಆಧುನಿಕ ಮಲಯಾಳ ಸಾಹಿತ್ಯದ ಕವಿತ್ರಯರ ಪೈಕಿ ಒಬ್ಬರು. ಇನ್ನಿಬ್ಬರು ಕುಮಾರನ್ ಆಶಾನ್ (1873-1924), ಉಳ್ಳೂರು ಎಸ್. ಪರಮೇಶ್ವರ ಅಯ್ಯರ್ (1877-1949). ನಾರಾಯಣ ಮೆನೋನ್ ಅವರು ವಳ್ಳತ್ತೋಳ್ ಎಂಬ ಹೆಸರಿನಲ್ಲೇ ಪ್ರಖ್ಯಾತರಾದರು. ಇವರು ಪೊನ್ನಾನಿ ತಾಲ್ಲೂಕಿನ ವೆಟ್ಟತ್ತುನಾಡು ಎಂಬಲ್ಲಿ 1878 ಅಕ್ಟೋಬರ್ 16ರಂದು ಜನಿಸಿದರು. ತಂದೆ ದಾಮೋದರನ್ ಎಳಯತು, ತಾಯಿ ಕುಟ್ಟಿಪ್ಪಾರು ಅಮ್ಮ. ತಮ್ಮ ಊರಿನಲ್ಲೇ ಪ್ರಾಥಮಿಕ ಶಿಕ್ಷಣ ಮುಗಿಸಿದರು. ಸೋದರಮಾವ ರಾಮುಣ್ಣಿ ಮೆನೋನ್ ಬಳಿ ಸಂಸ್ಕøತ ಹಾಗೂ ಆಯುರ್ವೇದ ವೈದ್ಯ ಕಲಿತರು. ಅನಂತರ ಸಂಸ್ಕøತ ಪಂಡಿತ ಕೈಕುಳಂಗರ ರಾಮವಾರಿಯರ್ ಅವರಲ್ಲಿ ಹೆಚ್ಚಿನ ಅಧ್ಯಯನ ನಡೆಸಿದರು. ತಂದೆಯ ಜೊತೆ ಕಥಕ್ಕಳಿ ಪ್ರದರ್ಶನಗಳಿಗೆ ಹೋಗುತ್ತಿದ್ದುದರಿಂದ ಇವರಿಗೆ ಆ ಕಲೆಯಲ್ಲಿ ಅಪಾರ ಆಸಕ್ತಿ ಬೆಳೆಯಿತು.

	ಕೇರಳ ಕಲ್ಪದ್ರುಮಮ್ ಎಂಬ ಅಚ್ಚಿನ ಮನೆಯಲ್ಲಿ ಮ್ಯಾನೇಜರ್ ಆಗಿ ಕವನಕೌಮುದಿ ಮಾಸಪತ್ರಿಕೆಯಲ್ಲಿ ಕವನಗಳನ್ನು ಪ್ರಕಟಿಸುತ್ತಿದ್ದರು. ಅಭಿಜಾತ ಸಾಹಿತ್ಯವನ್ನು ವಿಶೇಷವಾಗಿ ಅಭ್ಯಸಿಸಿದ್ದರೂ ಇವರು ಬರೆದದ್ದು ರಮ್ಯಕಾವ್ಯ. ಇವರ ಖಂಡಕಾವ್ಯಗಳು ಹೆಚ್ಚು ಜನಪ್ರಿಯ: ಬಂಧನಸ್ಥಾನಾಯ ಅನಿರುದ್ಧನ್ (1914), ಶಿಷ್ಯನುಮ್ ಮಗನುಮ್ (1918), ಮಗ್ದಲನ ಮರಿಯಮ್ (1921), ಸಾಹಿತ್ಯಮಂಜರಿ-4 ಭಾಗಗಳು (1916-24), ಭಾಗ 5-8 (1939-54) ಪಠ್ಯಪುಸ್ತಕಗಳು. ಕಾಳಿದಾಸನ ಋತುಸಂಹಾರವನ್ನು ಅನುಸರಿಸಿ ಋತುವಿಲಾಸಂ ಕೃತಿಯನ್ನು ಮಲಯಾಳ ಭಾಷೆಯಲ್ಲಿ ರಚಿಸಿದರು(1899). ಪುರಾಣಂಗಳ್, ಕರ್ಮಭೂಮಿಯುಡೆ ಪಿಂಜುಂಗಳ್, ಚಿತ್ರಯೋಗಂ (1935), ಭದ್ರಾವತಾರಮ್ (1940), ಬಾಪೂಜಿ (1941), ದಿವಾಸ್ವಪ್ನ (1944), ವಿಶಾಲತಿಲಕ, ಪದ್ಮದಲಂ (1948), ಕೋಮಲ ಶಿಶುಕಳ್ (1949), ಓಣಪ್ಪುಡವ, ಇಂಡ್ಯಯುಡೆ ಕರಚ್ಚಿಲ್, ಒರುಕ್ಕಾಟ್ಟು (1950), ಅಚ್ಚನುಮ್ ಮಗಳುಮ್, ಶಿಷ್ಯನುಮ್ ಮಗನುಮ್, ರಷ್ಯಯಿಲ್, ಸ್ತ್ರೀ (1951), ಕೊಚ್ಚುಸೀತ, ಬಧಿರವಿಲಾಪಮ್ (1952)-ಇವು ಇವರ ಇನ್ನಿತರ ಕೃತಿಗಳು.

	1940ರ ದಶಕದಲ್ಲಿ ವತ್ಸರಾಜನ ಕಪೋತಕೇಳಿ, ಕರ್ಪೂರಚರಿತಮ್, ರುಕ್ಮಿಣೀಹರಣಮ್, ತ್ರಿಪುರದಹನಮ್, 50ರ ದಶಕದಲ್ಲಿ ಕ್ಷೇಮೇಂದ್ರನ ಬೋಧಿಸತ್ತ್ವಪಾದನ ಕಲ್ಪಲತಾ, ಹಾಲನ ಗಾಥಾ ಸಪ್ತಶತಿ ಹಾಗೂ ಋಗ್ವೇದಗಳನ್ನು ಮಲಯಾಳ ಭಾಷೆಗೆ ಅನುವಾದಿಸಿದರು.

	ಇವರು ಕಲೆಗಳಿಗೆ ಪ್ರೋತ್ಸಾಹ ನೀಡಲು ಕೇರಳ ಕಲಾ ಮಂಡಲ (1930) ಸ್ಥಾಪಿಸಿದರು. ಇದು ಭಾರತೀಯ ಪ್ರದರ್ಶನಾತ್ಮಕ ಕಲೆಗಳ ಕೇಂದ್ರವಾಗಿ ಪ್ರಪಂಚ ಪ್ರಸಿದ್ಧಿ ಪಡೆಯಿತು. ಇಲ್ಲಿ ದೇಶ ವಿದೇಶಗಳ ವಿದ್ಯಾರ್ಥಿಗಳಿಗೆ ಕಥಕ್ಕಳಿ, ಕೂಡಿಯಾಟ್ಟಂ, ತುಳ್ಳಲ್, ಮೋಹಿನಿಯಾಟ್ಟಂ ಹಾಗೂ ವಾದ್ಯ ಸಂಗೀತಗಳ ತರಬೇತಿ ನೀಡಲಾಗುವುದು. 1946ರಲ್ಲಿ ಕೇರಳ ಸಾಹಿತ್ಯ ಪರಿಷತ್ತು ಸ್ಥಾಪಿಸಿ 10 ವರ್ಷ ಅದರ ಅಧ್ಯಕ್ಷರಾಗಿದ್ದು ಮಲಯಾಳ ಭಾಷಾ ಸಾಹಿತ್ಯಗಳ ಅಭಿವರ್ಧನೆಗಾಗಿ ಅಹರ್ನಿಶಿ ದುಡಿದರು.

	ಇವರಿಗೆ ಕೊಚ್ಚಿ ಮಹಾರಾಜರು ಕವಿತಿಲಕ (1919), ಕವಿ ಸಾರ್ವಭೌಮ (1928) ಎಂಬ ಬಿರುದುಗಳನ್ನು ನೀಡಿ ಗೌರವಿಸಿದರು. ಮದರಾಸು ಸರ್ಕಾರ ನಾಲ್ಕು ಜನ ಆಸ್ಥಾನ ಕವಿಗಳಲ್ಲಿ ಒಬ್ಬರಾಗಿ ಇವರನ್ನು ಆಯ್ಕೆ ಮಾಡಿತು (1948). ಇವರು ಕೇರಳ ಸಾಹಿತ್ಯ ಅಕಾಡೆಮಿಯ ಉಪಾಧ್ಯಕ್ಷರೂ ಕೇಂದ್ರ ಸಾಹಿತ್ಯ ಅಕಾಡೆಮಿಯ ಸದಸ್ಯರೂ ಆಗಿದ್ದರು. ಭಾರತ ಸರ್ಕಾರ ಇವರಿಗೆ ಪದ್ಮಭೂಷಣ (1955) ನೀಡಿ ಗೌರವಿಸಿತು.

	ವಾರ್ಸೊದಲ್ಲಿ ನಡೆದ ಶಾಂತಿ ಸಮ್ಮೇಳನದಲ್ಲಿ (1950) ಮಲಯಾಳ ಕವನ ವಾಚಿಸಿದರು ಹಾಗೂ ಪ್ಯಾರಿಸ್ ವಿಶ್ವವಿದ್ಯಾಲಯದಲ್ಲಿ ಮಲಯಾಳ ಭಾಷೆಯಲ್ಲೇ ಉಪನ್ಯಾಸ ನೀಡಿದರು. ಚೀನ, ಮಲಯ, ಸಿಂಗಪುರಗಳಿಗೆ ಕಥಕ್ಕಳಿ ತಂಡ ಕರೆದೊಯ್ದು ಭಾರತೀಯ ಸಂಸ್ಕøತಿಯನ್ನು ವಿದೇಶೀಯರಿಗೆ ಪರಿಚಯಿಸಿದರು (1951). ಇವರು 1957 ಮಾರ್ಚ್ 13ರಂದು ನಿಧನರಾದರು.			
								(ಎ.ಎಮ್.ಡಿ.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ